ಭಾರತದ ನೈಋತ್ಯಕ್ಕೆ ಅರೇಬಿಯನ್ ಸಮುದ್ರದ ದಕ್ಷಿಣಕ್ಕೆ ಹಿಂದೂ ಮಹಾಸಾಗರದಲ್ಲಿರವ ದ್ವೀಪಸಮೂಹ. ಈ ದ್ವೀಪ ಸಮೂಹ ಭಾರತದ ಕೇರಳ ರಾಜ್ಯದ ಪಶ್ಚಿಮಕ್ಕಿದ್ದು ಸಮುದ್ರ ತೀರದಲ್ಲಿರುವ ಕೊಚ್ಚಿನ್ ನಗರಕ್ಕೆ 280 ರಿಂದ 480 ಕಿಮೀ ದೂರದಲ್ಲಿದೆ. ಈ ದ್ವೀಪಗಳನ್ನು ಲಕ್ಷದ್ವೀಪ ಸಮುದ್ರ ಸುತ್ತುವರಿದಿದೆ. ಈ ದ್ವೀಪಗಳು ಉತ್ತರ ಅಕ್ಷಾಂಶ 8º-12º3' ನಿಂದ ಪೂರ್ವ ರೇಖಾಂಶ 71º-74ºಯಲ್ಲಿ ಪ್ರಸರಿಸಿವೆ. ಒಟ್ಟು ವಿಸ್ತೀರ್ಣ 32 ಚ.ಕಿಮೀ. ಜನಸಂಖ್ಯೆ 60,595(2001). ರಾಜಧಾನಿ ಕವರತ್ತಿ. ಮುಖ್ಯ ಭಾಷೆ ಮಲಯಾಳ, ಸಂಪರ್ಕ ಭಾಷೆ ಇಂಗ್ಲಿಷ್.
 
1991ರ ಅಂಕಿಅಂಶದ ಪ್ರಕಾರ ಸೇ. 56.31 ಮಂದಿ ಪಟ್ಟಣವಾಸಿಗಳಿದ್ದು, ಓದುಬರೆಹ ಬಲ್ಲವರ ಸಂಖ್ಯೆ ಸೇ. 79.23. ಭಾರತ ಕೇಂದ್ರಾಡಳಿತಕ್ಕೆ ಸೇರಿರುವ ಈ ದ್ವೀಪ ಸಮೂಹಕ್ಕೆ ಹಡಗುಗಳ ಮತ್ತು ವಿಮಾನ ಸಂಪರ್ಕವಿದೆ. ಈ ದ್ವೀಪಸ್ತೋಮದಲ್ಲಿ ವೃತ್ತಾಕಾರದ 12 ಹವಳ ದಿಬ್ಬಗಳು ಸೇರಿದಂತೆ 36 ದ್ವೀಪಗಳಿವೆ. ಇವುಗಳಲ್ಲಿ ಮುಖ್ಯವಾಗಿ ಹತ್ತು ದ್ವೀಪಗಳಲ್ಲಿ ಜನವಸತಿಯಿದೆ. ಅವುಗಳೆಂದರೆ-4.4 ಚ.ಕಿಮೀ. ವಿಸ್ತೀರ್ಣವಿದ್ದು 8323 ಮಂದಿಜನಸಂಖ್ಯೆಯುಳ್ಳ ಮಿನಿಕಾಯ್, 2.3 ಚ.ಕಿಮೀ. ವಿಸ್ತೀರ್ಣವಿದ್ದು 4079 ಜನಸಂಖ್ಯೆಯುಳ್ಳ ಕಲ್ಪೆನಿ, 4.8 ಚ.ಕಿಮೀ. ವಿಸ್ತೀರ್ಣವಿದ್ದು 9149 ಜನಸಂಖ್ಯೆಯ ಅಂಡ್ರತ್, 2.7 ಚ.ಕಿಮೀ. ವಿಸ್ತೀರ್ಣ ಹಾಗೂ 5667 ಜನಸಂಖ್ಯೆ ಯುಳ್ಳ ಅಗತ್ತಿ, 3.6 ಚ.ಕಿಮೀ. ವಿಸ್ತೀರ್ಣವಿದ್ದು 8684 ಮಂದಿಯುಳ್ಳ ಆಡಳಿತ ಕೇಂದ್ರವಾದ ಕವರತ್ತಿ, 2.6 ಚ.ಕಿಮೀ. ವಿಸ್ತೀರ್ಣ ವುಳ್ಳ 6445. ಜನಸಂಖ್ಯೆಯ ಅಮೆನಿ, 3.1 ಚ.ಕಿಮೀ. ವಿಸ್ತೀರ್ಣದ 3983 ಮಂದಿಯುಳ್ಳ ಕಡಮತ್, 1.6 ಚ.ಕಿಮೀ. ಇದ್ದು 3075 ಜನಸಂಖ್ಯೆಯುಳ್ಳ ಕಿಲ್ತಾನ್, 1.0 ಚ.ಕಿಮೀ. ವಿಸ್ತೀರ್ಣ 2050 ಜನಸಂಖ್ಯೆಯ ಚೆತಲಾತ್, 0.1 ಚ.ಕಿಮೀ. ವಿಸ್ತೀರ್ಣವಿದ್ದು 226 ಮಂದಿ ಇರುವ ಚಿತ್ರ. ನಿರ್ಜನವಾಗಿದ್ದ ಬಂಗರಮ್ ದ್ವೀಪ ಈಗ    ಜನವಸತಿಗೆ ಆಶ್ರಯ ನೀಡಿದೆ. 

ಸಾಕಷ್ಟು ಮಳೆ ಬೀಳುವ ಈ ದ್ವೀಪ ಸಮೂಹದಲ್ಲಿನ ಮುಖ್ಯ ಬೆಳೆ ತೆಂಗು. ಇದಕ್ಕೆ ಸಂಬಂಧಿಸಿದ ನಾರಿನ ವಿವಿಧ ಬಗೆಯ ಉದ್ಯೋಗ ಇಲ್ಲಿನ ಮುಖ್ಯ ಆರ್ಥಿಕ ಚಟುವಟಿಕೆಯ ಹಾಗೂ ಬೆಳವಣಿಗೆಯ ಮೂಲವಾಗಿದೆ. ಬಾಳೆಹಣ್ಣು, ಪರಂಗಿಹಣ್ಣು, ಸಪೋಟ, ನಿಂಬೆ, ಚಕ್ಕೋತ ಹಲಸಿನ ಹಣ್ಣು, ಕಾಡು ಬಾದಾಮಿ, ಹಾಗೂ ಕೆಲವು ಇನ್ನಿತರ ಹಣ್ಣುಗಳನ್ನು ತರಕಾರಿಗಳನ್ನೂ ಇಲ್ಲಿ ಬೆಳೆಯುತ್ತಾರೆ. ಈ ದ್ವೀಪಗಳ ಅಂಚಿನಲ್ಲಿ ಬೆಳೆಯುವ ಎರಡು ಬಗೆಯ ಸಮುದ್ರ ಹುಲ್ಲು ಭೂಸವೆತವನ್ನು ತಡೆಯುತ್ತದೆ. ಕವರತ್ತಿ, ಮಿನಿಕಾಯ್‍ನಲ್ಲಿ ಗೋಶಾಲೆಗಳಿವೆ. ಆಂಡ್ರತ್, ಕಿಲ್ತಾನ್, ಅಗೆತ್ತಿ, ಕಲ್ಪೆನಿ, ಕವರತ್ತಿ, ಕಡಮತ್ ಮುಂತಾದ ಕಡೆ ಕೋಳಿ ಸಾಕಣೆ ಕೇಂದ್ರಗಳಿವೆ. ಈ ದ್ವೀಪಗಳ ಸುತ್ತಲೂ ಇರುವ ಸಮುದ್ರದಲ್ಲಿ ಮೀನುಗಳು ಹೇರಳವಾಗಿ ಸಿಗುವುದರಿಂದ ಈ ಸಂಬಂಧವಾದ ವಿವಿಧ ಉದ್ಯೋಗಗಳು ಅಭಿವೃದ್ಧಿಯಾಗುತ್ತಿವೆ. ಯಂತ್ರೀಕರಣಗೊಂಡ ದೋಣಿಗಳ ತಯಾರಿಕೆ ಹಾಗೂ ಉಪಯೋಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇಲ್ಲಿನ ಜನವಸತಿಯುಳ್ಳ ಹತ್ತು ದ್ವೀಪಗಳಲ್ಲಿ ವಿದ್ಯುಚ್ಛಕ್ತಿಯ ಬಳಕೆಯಿದೆ. ನಿರ್ಜನವಾಗಿರುವ ಪಿತ್ತಿ ಎಂಬ ಪುಟ್ಟ ದ್ವೀಪದಲ್ಲಿ ನಾನಾ ಬಗೆಯ ಪಕ್ಷಿಗಳು ವಾಸಿಸುವುದರಿಂದ ಇದನ್ನು ಪಕ್ಷಿಗಳ ಧಾಮವೆಂದು ಗುರುತಿಸಲಾಗಿದೆ.

ಲಕ್ಷದ್ವೀಪದ ಆರ್ಥಿಕ ವ್ಯವಹಾರವೆಲ್ಲ ಕೃಷಿ ಅವಲಂಬಿತ. ಸು. 27.50 ಚ.ಕಿಮೀ ಪ್ರದೇಶ ಕೃಷಿಗಾಗಿ ಬಳಸಲಾಗುತ್ತಿದೆ. ಸುಮಾರು ವರ್ಷಕ್ಕೆ 27.7 ಮಿಲಿಯನ್ ತೆಂಗಿನ ಕಾಯಿಗಳ ಉತ್ಪಾದನೆಯಿದೆ. ಕೊಬ್ಬರಿ, ಬೆಲ್ಲ, ದ್ರಾಕ್ಷಾರಸದ ತಯಾರಿಕೆಯಿದೆ. ಹಗ್ಗ, ಹುರಿ ಇವುಗಳ ತಯಾರಿಕೆ ಆಡಳಿತಗಾರರ ಹಿಡಿತದಲ್ಲಿದ್ದು ಸಿದ್ಧವಸ್ತುಗಳನ್ನು ಅಕ್ಕಿಗೆ ಬದಲಾಯಿಕೊಳ್ಳುವುದುಂಟು. ಮಿನಿಕಾಯ್‍ನಲ್ಲಿ ಮೀನನ್ನು ಟಿನ್ನಿಗೆ ತುಂಬುವ ಕಾರ್ಖಾನೆಯಿದೆ. ಇಲ್ಲಿ ಮೀನಿನ ಬಳಕೆ ಹೆಚ್ಚು. 2500 ಟನ್‍ಗಳಷ್ಟು ಕೊಬ್ಬರಿ ಉತ್ಪಾದಿಸಿ ಸು.2000 ಟನ್ನುಗಳಷ್ಟನ್ನು ಮಂಗಳೂರು ಮತ್ತು ಕೋಳಿಕ್ಕೋಡ್ ಮಾರುಕಟ್ಟೆಗಳ ಮೂಲಕ ವಿತರಣೆ ಮಾಡಲಾಗುತ್ತದೆ. ಕಾರ್ಖಾನೆಗಳೂ ಸಣ್ಣ ಕೈಗಾರಿಕಾ ಘಟಕಗಳೂ ಸಹಕಾರ ಸಂಘಗಳೂ ಇಲ್ಲಿವೆ. ನವೋದಯ ಶಾಲೆ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ಒಂದು ಕೈಗಾರಿಕಾ ತರಬೇತಿ ಕೇಂದ್ರ ಮುಂತಾದ ಶಿಕ್ಷಣ ಸಂಸ್ಥೆಗಳಿವೆ. 1988ರಲ್ಲಿ ಸ್ಥಾಪಿತವಾದ ವನಿತ ಟಿ.ವಿ. ಸಂಘಟನಾ ಸಹಕಾರ ಸಂಘವಿದೆ.

ಚೆರಿಯನ್, ಸುಹೆಲಿ, ವಲಿಯಕರ ಮತ್ತು ತಿನಕರ ಇವು ಪ್ರವಾಸಿ ಕೇಂದ್ರಗಳಾಗಿವೆ. 1988ರಿಂದಲೇ ಬಂಗರಮ್ ಹತ್ತಿರವಿರುವ ಅಗತ್ತಿ ವಿಮಾನ ನಿಲ್ಧಾಣವಾಗಿದೆ. ಆಂಡ್ರತ್‍ನಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಯಿದೆ. ಒಂದು ಪ್ರಾಣಿ ಮತ್ತು ವಸ್ತುಸಂಗ್ರಹಾಲಯ 1989ರಲ್ಲಿ ಕವರತ್ತಿಯಲ್ಲಿ ನಿರ್ಮಿಸಲಾಗಿದೆ. ಲಕ್ಷದ್ವೀಪ ವಿಭಾಗೀಯ ಅಂಚೆ ಕಚೇರಿಯನ್ನು 1990ರಲ್ಲಿ ಪ್ರಾರಂಭಿಸಲಾಗಿದೆ. ಸರ್ಕಾರಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ಕಚೇರಿ ಇಲ್ಲಿದೆ. ಸರ್ಕಾರ ಇಂಗ್ಲಿಷ್ ಮತ್ತು ಮಲಯಾಳ ಭಾಷೆಯಲ್ಲಿ ಎರಡು ವಾರ್ತಾ ಪತ್ರಿಕೆಗಳನ್ನು ಪ್ರಕಟಿಸುತ್ತಿದೆ. 

ಸ್ಥಳೀಯರ ಹೇಳಿಕೆಯಂತೆ ಲಕ್ಷದ್ವೀಪಕ್ಕೆ ಕೇರಳದ ಕೊನೆಯ ದೊರೆ ಚೇರಮನ್ ಪೆರುಮಾಳ್ ಕಾಲದಲ್ಲಿ ಜನರು ಇಲ್ಲಿ ನೆಲೆಸಲಾರಂಭಿಸಿದರು. ಅರಬ್ ವ್ಯಾಪಾರಿಗಳ ಪ್ರಭಾವಕ್ಕೆ ಒಳಗಾಗಿ ಈ ದೊರೆ ಇಸ್ಲಾಂ ಧರ್ಮ ಸ್ವೀಕರಿಸಿ ಮೆಕ್ಕಕ್ಕೆ ಹೊರಟನೆಂದೂ ದೊರೆಯನ್ನು ಅರಸುತ್ತಾ ಹೊರಟ ಸೈನಿಕರಲ್ಲಿ ಕಣ್ಣಾನೂರಿನ ರಾಜನ ಸೈನಿಕರ ದೋಣಿ ಒಡೆದುಹೋಗಿ ಅದರಲ್ಲಿದ್ದವರು ಬಂಗರಮ್ ದ್ವೀಪವನ್ನು ಸೇರಿದರೆಂದೂ ಅವರು ಇನ್ನೂ ಕೆಲವು ದ್ವೀಪಗಳನ್ನು ನೋಡಿ ಅನಂತರ ಹಿಂದಿರುಗಿದರೆಂದೂ ಹೀಗೆ ಹಿಂದಿರುಗಿದ ಅನಂತರ ಮತ್ತೊಂದು ಸೈನಿಕರ ಗುಂಪು ಶೋಧನೆಯಲ್ಲಿ ಹೊರಟು ಅಮಿನಿ ದ್ವೀಪ ಸೇರಿ ಅಲ್ಲಿ ನೆಲೆಸಿದರೆಂದೂ ಪ್ರತೀತಿ. ಇಲ್ಲಿರುವ ಗುಂಪುಗಳಲ್ಲಿ ಭೂಮಾಲೀಕರನ್ನು ಕೋಯಾಗಳೆಂದೂ ನಾವಿಕರನ್ನು ಮಾಲ್ಮಿಸ್ ಎಂದೂ ರೈತರನ್ನು ಮೆಲಚರಿಸ್ ಎಂದೂ ಗುರುತಿಸುತ್ತಾರೆ. ಉಬೇದುಲ್ಲಾ ಎಂಬ ಮುಸ್ಲಿಮ್ ಸಂತ ಇಲ್ಲಿನ ಮಂದಿಗೆ ಇಸ್ಲಾಂ ಧರ್ಮವನ್ನು ಬೋಧಿಸಿದನೆಂದೂ ಆಂಡ್ರತ್‍ನಲ್ಲಿರುವ ಈತನ ಸಮಾಧಿಗೆ ಮುಸ್ಲಿಮರು ಇಂದೂ ಭಯಭಕ್ತಿಯಿಂದ ನಡೆದುಕೊಳ್ಳತ್ತಾರೆ. ಚಿರಕ್ಕಲ್‍ನ ಹಿಂದೂ ರಾಜನ ಆಡಳಿತಕ್ಕೆ ಸೇರಿದ್ದ ಈ ಪ್ರದೇಶ ಮುಂದೆ 16ನೆಯ ಶತಮಾನದ ಮಧ್ಯದಲ್ಲಿ ಕಣ್ಣಾನೂರಿನ ಮುಸ್ಲಿಮ್ ಅರಕ್ಕಲ್ ರಾಜನ ಆಡಳಿತಕ್ಕೆ ಸೇರಿತು. 1854ರಲ್ಲಿ ಇದು ಇಂಗ್ಲಿಷರ ವಶವಾಯಿತು. 1956 ನವೆಂಬರ್ 1 ರಂದು ಭಾರತದ ಕೇಂದ್ರಾಡಳಿತಕ್ಕೆ ಸೇರಿ 1973ರಲ್ಲಿ ಲಕ್ಷದ್ವೀಪವೆಂದು ನಾಮಕರಣಗೊಂಡಿತು. ಕೇಂದ್ರಾಡಳಿತಕ್ಕೆ ಬರುವ ಮೊದಲು ಲಕಡೀವ್ಸ್ ಎಂದು ಕರೆಯುತ್ತಿದ್ದ ಈ ಪ್ರದೇಶ ಮದರಾಸು (ಇಂದಿನ ಚೆನ್ನೈ) ರಾಜ್ಯದ ಆಡಳಿತಕ್ಕೆ ಸೇರಿತ್ತು. 1964ರಲ್ಲಿ ಕವರತ್ತಿ ದ್ವೀಪವನ್ನು ಲಕ್ಷದ್ವೀಪಗಳ ರಾಜಧಾನಿಯನ್ನಾಗಿ ಮಾಡಲಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ